ಒಟ್ಟು ಪುಟವೀಕ್ಷಣೆಗಳು

ಭಾನುವಾರ, ಏಪ್ರಿಲ್ 5, 2020

ನಿನ್ನ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ

 "ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ..." ಸಿ. ಅಶ್ವಥ್ ರವರ ಹಾಡು ಹಾಗೇ ಮುಂದುವರೆದಿತ್ತು. ಖಾಲಿ ರಸ್ತೆ, ಮಧ್ಯಾಹ್ನದ  ಬಿರುಬಿಸಿಲಿನಲ್ಲಿ ಕಾರು ಹಾಗೆಯೇ ಸಾಗುತ್ತಲಿತ್ತು.
                 
 ಎಲ್ಲಿಗೆ ಹೊರಟಿದ್ದೇನೆ ಎಂಬ ಗುರಿಯೂ ಇಲ್ಲದೆ, ಎಲ್ಲಿಗೆ ಹೋಗಬೇಕೆಂಬ ಗೊಂದಲವೂ ಇಲ್ಲದೆ ಆದಿತ್ಯ ನೆಮ್ಮದಿಯನ್ನು ಹುಡುಕಿ ಹೊರಟಿದ್ದ. ಖಾಲಿ ರಸ್ತೆ, ಸುತ್ತಲೂ ಮರುಭೂಮಿ, ನನ್ನ ಜೀವನವೂ ಹೀಗೆ ಖಾಲಿಯಾಯಿತಾ ಎನ್ನುವ ಅನುಮಾನವೊಂದು ಕಾಡಲಾರಂಭಿಸಿತು.

  ಹೌದು, ಒಂದು ವರ್ಷದ ಹಿಂದೆ ಎಷ್ಟು ಚೆನ್ನಾಗಿತ್ತು ಜೀವನ. ಒಳ್ಳೆ ಕೆಲಸ, ಕೈತುಂಬ ಸಂಬಳ, ಕಾರು, ಮನೆ ಎಲ್ಲವೂ ಇತ್ತು. 
                 
  ಎಲ್ಲವನ್ನೂ ನೆನೆಯುತ್ತ ನೆನಪಿನಂಗಳಕ್ಕೆ ಜಾರಿದ ಆದಿತ್ಯ. 

                                                 --------------------*--------------------*---------------------

 ಮಳೆಗಾಲ.. ಸುತ್ತಲೂ ಮಲೆನಾಡಿನ ಹಸಿರು.. ಎಷ್ಟು ಹೊತ್ತಾದರೂ ಬಿಡದ ಜಿಟಿ ಜಿಟಿ ಮಳೆ.. ಸುತ್ತಲೂ ನಿಸರ್ಗದ ಸೌಂದರ್ಯವನ್ನೇ ಹೊತ್ತು ನಿಂತಿರುವ ಹಸಿರು ಬೆಟ್ಟ ಗುಡ್ಡಗಳು,  ಕಾಡು, ಅರಳಿ ನಿಂತಿರುವ ಹೂಗಳು, ಮಳೆಗೆ ಖುಷಿಯಾಗಿ ಅರಚುತ್ತಿರುವ ಕಪ್ಪೆಗಳು, ಅಬ್ಬಾ ಮಳೆಗಾಲದ ಅನುಭವವೇ ಬೇರೆ. ಅದರಲ್ಲೂ ಮಲೆನಾಡಿನ ಪ್ರಕೃತಿ ಸೊಬಗಿನ ಮುಂದೆ ಯಾವ ಸ್ವರ್ಗವೂ ಇಲ್ಲ.

  ಪ್ರಕೃತಿಯ ಸೊಬಗನ್ನು ಸವಿಯುತ್ತ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದ ಆದಿತ್ಯ. 

 ಅಬ್ಬಾ ಇಲ್ಲಿಯವರೆಗೂ ಬೆಂಗಳೂರಿನ ಬಗ್ಗೆ ಕೇಳಿದ್ದಷ್ಟೇ. ಯಾರನ್ನೇ ಕೇಳಿದರೂ ಬಗೆ ಬಗೆಯ ಕಥೆಗಳು, ವರ್ಣನೆಗಳು ಎಲ್ಲರದೂ ವಿಭಿನ್ನ ಅನುಭವವೇ. 

  ಬೆಂಗಳೂರು.. ಮಾಯಾನಗರಿ...!

 ಮೊದಲ ಬಾರಿಗೆ ಬೆಂಗಳೂರಿಗೆ ಹೊರಟಾಗ ಕೌತುಕ, ಭಯ, ಖುಷಿ, ಮಾಯಾನಗರಿಯ ಬಗ್ಗೆ ಭಿನ್ನ ವಿಭಿನ್ನ ಕುತೂಹಲಗಳೆಲ್ಲವೂ ಆವರಿಸಿತ್ತು ಮನದೊಳಗೆ.

 ಹೊರಡುವ ಮುಂಚೆ ಅಮ್ಮ ತೋರಿದ ಕಾಳಜಿ, ಆಚೆ ಚೆನ್ನಾಗಿರೋ ಕಡೆನೇ ಊಟ ಮಾಡು, ಜಾಸ್ತಿ ಸುತ್ತಾಡಬೇಡ, ಆರೋಗ್ಯ ನೋಡಿಕೊ ಎಂಬೆಲ್ಲ ಮಾತುಗಳೊಂದಿಗೆ ಪ್ರೀತಿಯಿಂದ ಮಾಡಿದ ತಿಂಡಿ ತಿನಿಸುಗಳೆಲ್ಲವನ್ನೂ ಆದಿತ್ಯನಿಗೇ ತುಂಬಿಸಿ ಕೊಟ್ಟಿದ್ದಳು ಅಮ್ಮ.

 ಇನ್ನು ಅಪ್ಪ ಹೇಳಿದ ಮಾತುಗಳು, ಯಾರೊಂದಿಗೆ ವ್ಯವಹರಿಸುವಾಗಲೂ ಹುಷಾರು, ಹಣ ಭದ್ರವಾಗಿಟ್ಟುಕೊ, ಪ್ರತಿದಿನ ಫೋನ್ ಮಾಡು ಎಂಬ ಸಲಹೆಗಳು ಆದಿತ್ಯನ ಮೇಲಿರುವ ಪ್ರೀತಿಯನ್ನು ವಿಭಿನ್ನ ಬಗೆಯಿಂದಲೇ ವ್ಯಕ್ತಪಡಿಸಿದ್ದರು ಅಪ್ಪ.

  ಅಂತೂ ಬೇರೆಯವರ ವರ್ಣನೆಯಿಂದಲೇ ಕೇಳಿ ತಿಳಿದಿದ್ದ ಬೆಂಗಳೂರಿನ ಅನುಭವವನ್ನು ಸ್ವತಃ ಆದಿತ್ಯನೇ ಅನುಭವಿಸುವ ಕಾಲ ಕೂಡಿ ಬಂದಿತ್ತು.

  ಇನ್ನೇನು ಬಸ್ಸು ಬೆಂಗಳೂರಿಗೆ ಸನಿಹವಾಗುತ್ತಿದೆ ಎಂದಾಗ ಎದೆ ಬಡಿತವೂ ಜಾಸ್ತಿಯಾಗಿತ್ತು.

  ಅಂತೂ ಬಸ್ಸು ಬೆಂಗಳೂರಿಗೆ ಬಂತು. ಬಸ್ಸನ್ನಿಳಿದು ಮೆಜೆಸ್ಟಿಕ್ ನಲ್ಲಿ ಬೆರಗಿನ ಕಣ್ಣುಗಳಿಂದಲೇ ಅತ್ತಿತ್ತ ನೋಡುತ್ತಾ ನಿಂತಿದ್ದ ಆದಿತ್ಯ.

                                       ----------------------*------------------------*----------------------

 ಪ್ರಕೃತಿ.. ಬರೀ ಮಾತಿನಿಂದಲೇ ಜಗತ್ತನ್ನು ಗೆಲ್ಲಬಲ್ಲೆನೆಂಬ ಹುಮ್ಮಸ್ಸು, ಮುದ್ದು ಮುಖ, ಪ್ರಕೃತಿಯ ಎಲ್ಲವನ್ನೂ ಕೌತುಕದಿಂದಲೇ ಕಾಣುವ ಹೊಳೆಯುವ ಕಣ್ಣುಗಳು, ಸೌಂದರ್ಯವನ್ನು ಹೆಚ್ಚಿಸಲೆಂಬಂತೆಯೇ ಗಾಳಿಗೆ ಹಾರಾಡುತ್ತ ಮುಖದ ಮೇಲೆ ಮತ್ತೆ ಮತ್ತೆ ಬರುತ್ತಿರುವ ಮುಂಗುರುಳು, ಬೆಳದಿಂಗಳನ್ನೇ ನಾಚಿಸುವ ಸೌಂದರ್ಯ, ಆತ್ಮವಿಶ್ವಾಸವೇ ಬಲ ಎಂದು ನಂಬಿದ ಹುಡುಗಿ. ಸುರಿವ ತುಂತುರು ಮಳೆಯ ನಡುವೆ ಬಸ್ಸಿಗಾಗಿ ಕಾಯುತ್ತಿದ್ದಳು.

  ಮುಂದುವರೆಯುವದು. . . . . . . .


ಶುಕ್ರವಾರ, ಮೇ 27, 2016

ಗುರಿ ಇರದ ದಾರಿಯಲಿ
ಕಣ್ಮುಚ್ಚಿ ನಡೆವಾಸೆ...
ಮುಂಜಾನೆ ಮಳೆಯಲ್ಲಿ
ಹುಚ್ಚೆದ್ದು ಕುಣಿವಾಸೆ...
ಕೊನೆಯಿರದ ಪ್ರೀತಿಯಲಿ
ಮಿಂದೆದ್ದು ನೆನೆಯುವಾಸೆ...

ಗುರುವಾರ, ಏಪ್ರಿಲ್ 7, 2016

ಯುಗಾದಿ

ಮತ್ತೆ ಬಂದಿದೆ ಯುಗಾದಿ
ಮತ್ತೊಂದು ಯುಗಾಂತ್ಯ
ಕಳೆದ ಯುಗದಲಿ ಗಳಿಸಿದ್ದೆಷ್ಟೊ, ಉಳಿಸಿದ್ದೆಷ್ಟೊ, ಕಳೆದಿದ್ದೆಷ್ಟೊ
ಹೊಸ ಯುಗದಲಿ ಸ್ನೇಹ ಗಳಿಕೆಯಾಗಲಿ, ಬಾಂಧವ್ಯ ಉಳಿಯಲಿ, ದ್ವೇಷ ಕಳೆದುಹೋಗಲಿ
ಯುಗಾದಿ ಹಬ್ಬದ ಶುಭಾಶಯಗಳು

ಶನಿವಾರ, ಮಾರ್ಚ್ 21, 2015

ಮತ್ತೆ ಉದಯಿಸುವ 'ರವಿ'

ಜಗವೆಲ್ಲ ಆವರಿಸಿದೆ ಕತ್ತಲು.. ಗಾಢಾಂಧಕಾರ..
ಎಲ್ಲಿಯವರೆಗೆ...?
ಜನ ದೀಪ ಹಚ್ಚುತ್ತಿಹರು.. ಮನೆ ಮನಗಳಲ್ಲಿ...
ಅದೇ ಭರವಸೆಯ ಬೆಳಕು..
ಮತ್ತೆ ಉದಯಿಸುವ 'ರವಿ'
-------------------------
ಡಿ. ಕೆ. ರವಿಯವರಿಗೆ ಅರ್ಪಣೆ

ಸೋಮವಾರ, ನವೆಂಬರ್ 10, 2014

ನೀನಿಲ್ಲದೆ...

ಮೊದಲ ಮಳೆಯಂತೆ ಇಳಿದೆ ನನ್ನಲಿ..
ಮುಂಜಾನೆ ಬೇಗ ಎದ್ದು ರೆಡಿಯಾಗಿದ್ದು ಅದೇ ಮೊದಲ ಸಲ ಇರಬೇಕು. ಮನಸ್ಸಿನಲ್ಲಿ ಏನೋ ಒಂಥರಾ ಖುಷಿ, ಸಡಗರ, ಸ್ವಲ್ಪ ಭಯ ಎಲ್ಲವೂ ಒಟ್ಟೊಟ್ಟಿಗೆ ಶುರುವಾಗಿತ್ತು. ಮಳೆಗಾಲ ಆರಂಭದ ಸಮಯ, ಜೊತೆಗೆ ಜೀವನದ ಕನಸಾದ ಇಂಜಿನೀಯರಿಂಗೂ ಆರಂಭವಾಗಿತ್ತು. ಕಾಲೇಜಿಗೆ ಹೊರಡುವ ಮುಂಜಾನೆ ಸಣ್ಣದಾಗಿ ಸುರಿಯುತ್ತಿದ್ದ ಜಿಟಿ ಜಿಟಿ ಮಳೆಹನಿಗಳೇ ಸ್ನೇಹಿತರು. ಬಿಸಿ ಬಿಸಿ ಚಹಾ ಹೀರಿ ಕೊಡೆ ಹಿಡಿದು ಹೊರಟವನಿಗೆ ಕಾಲೇಜು ರಸ್ತೆಯಲ್ಲಿ ಕಂಡಿದ್ದೇ ಅವಳು. ಮಳೆಗಾಲದ ಮೊದಲ ಮಳೆಹನಿಯ ನೆರಳಿನಲ್ಲಿ ಕಂಡ ಅವಳು ಹೃದಯದಲ್ಲಿ ಶಾಶ್ವತವಾಗಿ ನಿಂತುಬಿಟ್ಟಳು. ಊಹುಂ ಅವಳು ಯಾರೆಂದು ಗೊತ್ತಿಲ್ಲ. ಮೊದಲ ದಿನ ತನ್ನಂತೆಯೇ ಅವಳೂ ಕಾಲೆಜು ಬಸ್ಸಿಗೆ ಕಾಯುತ್ತಿರಬಹುದು. ಖಂಡಿತ ಜೀವನದ ಮೊದಲ ಪ್ರೀತಿ ಆರಂಭವಾಗಿದ್ದು ಇಲ್ಲಿಂದಲೇ..
ಮೊದಲ ಮಳೆ ಹನಿಯಂತೆ.
ಮನಸ್ಸಲ್ಲೆಲ್ಲ ಅವಳದೇ ಧ್ಯಾನ.. ಹಿಂದಿನಿಂದ ಗೌತಮ್ ಗೌತಮ್ ಎಂದು ಸ್ನೇಹಿತ ಕರೆದಾಗಲೇ ಅರಿವಾಗಿದ್ದು ಕಾಲೇಜು ಬಸ್ಸು ಆಗಲೇ ಬಂದು ನಿಂತಿದೆ ಎಂದು.
ಮುಂದುವರೆಯುವದು......

ಶುಕ್ರವಾರ, ಸೆಪ್ಟೆಂಬರ್ 26, 2014

ಬಲ್ಲವ

ಎಲ್ಲ ಬಲ್ಲವರಿಲ್ಲ ಜಗದಲ್ಲಿ
ಎಲ್ಲ ಬಲ್ಲೆನೆಂದು ಬೀಗುತಿರುವವನು
ಬೆಲ್ಲ ತಿಂದೆನೆಂಬ ಭ್ರಮೆಯಲ್ಲಿರುವವನು
ನಿಜವಾದ ಜ್ಞಾನದ ಸವಿಬೆಲ್ಲ ಬೇರೆಲ್ಲಿಹುದೋ